ಅಣೆಕಟ್ಟು
ಹೊಳೆಗೆ ಅಡ್ಡಲಾಗಿ ಕಲ್ಲುಗಾರೆಯಿಂದ ಇಲ್ಲವೆ ಇಟ್ಟಿಗೆಗಾರೆಯಿಂದ ಕಟ್ಟಿದ ನೀರಾವರಿಯ ಕಟ್ಟಡ (ವಿಯರ್). ಕಟ್ಟೆಯೂ (ಡ್ಯಾಮ್) ಹೀಗೆ ಹೊಳೆಗೆ ಅಡ್ಡಲಾಗಿ ಕಲ್ಲುಗಾರೆಯಿಂದ ಕಟ್ಟಿದ ನೀರಾವರಿಯ ಕಟ್ಟಡವೇ. ಇವೆರಡಕ್ಕೂ ಒಂದು ದೊಡ್ಡ ವ್ಯತ್ಯಾಸವಿದೆ. ಹೊಳೆಯಲ್ಲಿ ಪ್ರವಾಹಬಂದಾಗ ಅಣೆಕಟ್ಟಿನ ಮೇಲೆ ನೀರು ಉರುಳಿ ಕೆಳಕ್ಕೆ ಹೋಗುತ್ತದೆ. ಕಟ್ಟೆಯಾದರೋ ಎತ್ತರವಾಗಿದ್ದು ಎಂಥ ಪ್ರವಾಹ ಬಂದರೂ ತಡೆದು ನಿಲ್ಲಿಸುತ್ತದೆ ; ಮೇಲುಗಡೆಯಿಂದ ಹರಿಯಲು ಬಿಡುವುದಿಲ್ಲ.
	
ಅಣೆಕಟ್ಟುಗಳನ್ನು ಹಿಂದಿನ ಕಾಲದಲ್ಲಿ ಒರಟು ಕಲ್ಲುಗಳಿಂದ ಕಟ್ಟುತ್ತಿದ್ದರು. ಈಗ ಕಲ್ಲುಗಾರೆಯಿಂದ ಕಟ್ಟುವುದೇ ರೂಢಿ ; ಇಟ್ಟಿಗೆ ಗಾರೆಯಿಂದ ಕಟ್ಟುವುದು ನಿಂತುಹೋಗಿದೆ. ಅಣೆಕಟ್ಟು ಕಟ್ಟೆಯ ಹಾಗೆ ನಾಲೆಗಳ ಕೆಳಗಿನ ಜಮೀನಿಗೆಲ್ಲಾ ಸಾಕಾಗುವಷ್ಟು ನೀರನ್ನು ಕೂಡಿಡುವುದಿಲ್ಲ. ಹೊಳೆಯಲ್ಲಿ ಬರುವ ಪ್ರವಾಹ ಅಣೆಕಟ್ಟಿನ ಮೇಲಿನಿಂದ ದುಮುಕಿ ಕೆಳಕ್ಕೆ ಹೋಗುತ್ತದೆ. ಆಗ ಎತ್ತರವಾದ ಮಟ್ಟದಲ್ಲಿರುವ ಪ್ರವಾಹದ ನೀರು ನಾಲೆಯೊಳಕ್ಕೆ ನುಗ್ಗಿ ತಗ್ಗಿನ ಜಮೀನುಗಳಿಗೆ ನೀರನ್ನು ಒದಗಿಸುತ್ತದೆ. 
	
ಅಡಿಪಾಯದ ದೃಷ್ಟಿಯಿಂದ ಅಣೆಕಟ್ಟುಗಳನ್ನು ಎರಡು ಭಾಗವಾಗಿ ವಿಂಗಡಿಸಬಹುದು. 1. ಅಡಿಪಾಯದಲ್ಲಿ ಗಟ್ಟಿಬಂಡೆ ಇರತಕ್ಕವು. ನದಿಯ ಮೊದಲ ಮಜಲಿನಲ್ಲಿ ಭೂಮಿ ಉಬ್ಬು ತಗ್ಗುಗಳಿಂದ ಕೂಡಿರುತ್ತದೆ. ಇಲ್ಲಿ ಅಡಿಪಾಯದಲ್ಲಿ ಒಳ್ಳೆಯ ಬಂಡೆ ದೊರೆಯಬಹುದು. ಆದರೆ ಇಲ್ಲಿ ನೀರಾವರಿಗೆ ಹೆಚ್ಚು ಭೂಮಿ ಸಿಕ್ಕುವುದಿಲ್ಲ. 2. ಅಡಿಪಾಯದಲ್ಲಿ ಗಟ್ಟಿಬಂಡೆ ಇರತಕ್ಕವು. ಅಣೆಕಟ್ಟಿನ ನೀರಿನಿಂದ ಪರಮೋಪಕಾರವಾಗುವುದು ನದಿಯ ಕೊನೆಯ ಮಜಲಾದ ಡೆಲ್ಟ ಪ್ರದೇಶದಲ್ಲಿ. ನೀರಿನಲ್ಲಿ ಬರುವ ಗೋಡು ಪ್ರತಿವರ್ಷವೂ ಗದ್ದೆಗಳ ಮೇಲೆ ಹಾದು ಭೂಮಿಯನ್ನು ಫಲವತ್ತಾಗಿ ಮಾಡುತ್ತದೆ. ಇಲ್ಲಿ ನದಿಯೇ ದಿಬ್ಬಗಳ ಮೇಲೆ ಹರಿದು ಗದ್ದೆಗಳು ಅದಕ್ಕಿಂತ ಕೆಳಮಟ್ಟದಲ್ಲಿರುವುದರಿಂದ ಕಾಲುವೆಗಳನ್ನು ತೆಗೆಯುವುದು ಸುಲಭ. ದಕ್ಷಿಣ ಭಾರತದಲ್ಲಿ ಕಾವೇರಿ, ಕೃಷ್ಣಾ, ಗೋದಾವರಿ, ಉತ್ತರದಲ್ಲಿ ಮಹಾನದಿ, ಗಂಗಾ, ಸಿಂಧು, ಯಮುನಾ-ಈ ನದಿಗಳ ಬಯಲುಗಳಲ್ಲಿ ಜನ ಪುಷ್ಟರಾಗಿ ಬಾಳುತ್ತಿರುವುದಕ್ಕೆ ಅಣೆಕಟ್ಟುಗಳಿಂದ ಸಾಧ್ಯವಾದ ನೀರಾವರಿಯೇ ಮುಖ್ಯ ಕಾರಣ. ತಂಜಾವೂರು ಜಿಲ್ಲೆಯ ಕಾವೇರಿ ಡೆಲ್ಟದಲ್ಲಿ ಜನ ತುಷ್ಟರೂ ಪುಷ್ಟರೂ ಮೇಧಾವಿಗಳೂ ಆಗಿರುವುದಕ್ಕೆ ಸರ್ ಆರ್ಥರ್ ಕಾಟಿನ್ ನಿರ್ಮಿಸಿದ ನೀರಾವರಿ ಕೆಲಸಗಳು ಬುನಾದಿಯಾಗಿವೆ. 
	
ಒಂದು ಅಣೆಕಟ್ಟಿನ ಯೋಜನೆಯ ಮುಖ್ಯವಾದ ಭಾಗಗಳು ಇವು : 1. ಅಣೆಕಟ್ಟು : ಇದು ಕೆಳಗಿನ ನಾಲೆಗಳಿಂದ ನೀರಾವರಿಯಾಗುವ ಗದ್ದೆಗಳಿಗೆ ಸಾಕಷ್ಟು ನೀರು ಒದಗಿಸುವಷ್ಟು ಎತ್ತರವಾಗಿರಬೇಕು. 2. ಅಣೆಕಟ್ಟಿನ ಎರಡು ದಡಗಳಿಂದ ಹೊರಡುವ ನಾಲೆಗಳು : ಇವುಗಳ ನೀರಿನ ಮಟ್ಟ ಗದ್ದೆಗಳಿಗಿಂತ ಸಾಕಷ್ಟು ಎತ್ತರವಾಗಿರಬೇಕಲ್ಲದೆ ಸಾಕಷ್ಟು ನೀರು ಒದಗಿಸುವಷ್ಟು ದೊಡ್ಡವಾಗಿರಬೇಕು. 3. ಅಣೆಕಟ್ಟಿನಿಂದ ಎರಡು ದಡಗಳಲ್ಲೂ ನಾಲೆಗೆ ಬಿಡುವ ನೀರನ್ನು ನಿಯಂತ್ರಣ ಮಾಡುವ ತೂಬು. 4. ಹೊಳೆಯ ಪ್ರವಾಹದಲ್ಲಿ ಬರುವ ಮೆಕ್ಕಲುಮಣ್ಣನ್ನು ಆಚೆಗೆ ಸಾಗಿಸಲು ತಗ್ಗಿನ ಮಟ್ಟದಲ್ಲಿರುವ ಬಾಗಿಲುಗಳು. 5. ಮಹಾ ಪ್ರವಾಹ ನದಿಯ ದಡಗಳಮೇಲೆ ಉರುಳುವುದನ್ನು ತಡೆಯುವುದಕ್ಕೆ ಏರಿಗಳು (ಬ್ಯಾಂಕ್ಸ್). 
	
ಕಲ್ಲಿನ ಅಡಿಪಾಯದ ಮೇಲೆ ನದಿಯ ಪ್ರಾರಂಭದ ಗುಡ್ಡಗಾಡಿನ ಪ್ರದೇಶದಲ್ಲಿ ಕಟ್ಟಿರುವ ಸಣ್ಣ ಅಣೆಕಟ್ಟಿಗೆ ಭದ್ರಾವತಿಯ ಮೇಲುಗಡೆ ಕಟ್ಟಿರುವ ಭದ್ರಾ ಅಣೆಕಟ್ಟು ಒಳ್ಳೆಯ ಉದಾಹರಣೆ. ಈ ಸ್ಥಳದಲ್ಲಿ ನದಿಯ ಜಲಾನಯನಭೂಮಿಯ ವಿಸ್ತೀರ್ಣ 2805 ಚ.ಕಿ.ಮೀ. ಗಳು. ನದಿಯ ಮೇಲುಭಾಗದಲ್ಲಿ ವರ್ಷಕ್ಕೆ ಸರಾಸರಿ 300 ಸೆಂ.ಮೀ. ಮಳೆ ಬೀಳುತ್ತದೆ. ಇಲ್ಲಿ ನದಿಯ ಮಹಾಪ್ರವಾಹದ ಅಳತೆ 1,18,000 ಕ್ಯುಸೆಕ್ಕುಗಳು. ಭದ್ರಾನದಿಯ ತಳದ ಅಗಲ 3ಮೀ ದಡಗಳು ಕಡಿದಾಗಿರುವುದರಿಂದ ಮಹಾಪ್ರವಾಹದ ಮಟ್ಟದಲ್ಲಿ ಅಗಲ 275 ಮೀ. ನದಿಯ ತಳದಮೇಲೆ ಅಣೆಕಟ್ಟಿನ ಸರಾಸರಿ ಎತ್ತರ 3ಮೀ ಮಹಾಪ್ರವಾಹ ಅಣೆಕಟ್ಟಿನ ಮೇಲೆ 3.48 ಮೀ. ಹರಿಯುತ್ತದೆ. ಆಗ ಅಣೆಕಟ್ಟಿನ ಕೆಳಗಿನ ನೀರಿನಮಟ್ಟ ತಲೆಮಟ್ಟದ ಮೇಲೆ 1.06ಮೀ. ಇರುತ್ತದೆ. ಎಂದರೆ ಮಹಾ ಪ್ರವಾಹ ಬಂದಾಗ ಅಣೆಕಟ್ಟು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿರುತ್ತದೆ. 
	
ಈ ನಮೂನೆಯ ಅಣೆಕಟ್ಟುಗಳನ್ನು ಮೈಸೂರು ಸೀಮೆಯಲ್ಲಿ ಕಾವೇರಿ, ಲಕ್ಷ್ಮಣತೀರ್ಥ, ಹೇಮಾವತಿ, ಕಬಿನಿ ನದಿಗಳ ಮೇಲೆ ಮೊದಲನೆಯ ಗುಡ್ಡಗಾಡಿನ ಮಜಲಿನಲ್ಲೂ ಎರಡನೆಯ ಬಯಲುಸೀಮೆಯ ಮಜಲಿನಲ್ಲೂ ಒಂದರ ಕೆಳಗೆ ಒಂದನ್ನು ಕಟ್ಟಿ ವಿಶಾಲವಾದ ಪ್ರದೇಶದಲ್ಲಿ ಬತ್ತದ ಬೆಳೆಗೆ ನೀರನ್ನು ಶಾಶ್ವತವಾಗಿ ಒದಗಿಸಿದ್ದಾರೆ. 
	
ಮಹಾನದಿಯ ಮಜಲುಗಳು : ನೀರಿನ ಪ್ರವೇಶಕ್ಕೆ ಎಡೆಗೊಡುವಂಥ ಮರಳಿನ ಅಡಿಪಾಯದ ಮೇಲೂ ಅಣೆಕಟ್ಟುಗಳನ್ನು ಕಟ್ಟುವುದು ಅನಿವಾರ್ಯವಾಗುತ್ತದೆ. ನಮ್ಮ ನದಿಗಳ ಮಲೆನಾಡಿನ ಮಜಲಿನಲ್ಲಿ ಮಳೆಯೇ ಸಮೃದ್ಧವಾಗಿ ಬೀಳುವುದರಿಂದ ನೀರಾವರಿಯ ಅವಶ್ಯಕತೆ ಕಡಿಮೆ. ಎರಡನೆಯ ಮಜಲಿನಲ್ಲಿ ಬಯಲು ಸೀಮೆಯಲ್ಲಿ ಅಣೆಕಟ್ಟುಗಳಿಗೆ ಕಲ್ಲಿನ ಅಡಿಪಾಯ ಸಿಕ್ಕುತ್ತದೆ. ಈ ಮಜಲಿನ ಕೃಷ್ಣರಾಜಸಾಗರದಲ್ಲಿ ಕಾವೇರಿಗೆ ಅಡ್ಡಲಾಗಿ ನದಿಯಮಟ್ಟದ ಮೇಲೆ 39.43 ಮೀ. ಎತ್ತರವಾದ ಕಲ್ಲುಗಾರೆಯ ಕಟ್ಟೆಯನ್ನು ಕಟ್ಟಿದ್ದಾರೆ. ನದಿಯ ಮೂರನೆಯ ಮಜಲಿನಲ್ಲಿ ಜಲಾನಯನಭೂಮಿ ವಿಸ್ತಾರವಾಗಿರುವುದರಿಂದ ನದಿಯಲ್ಲಿ ಹರಿಯುವ ನೀರು ಹೆಚ್ಚು. ಇಲ್ಲಿ ದಡಗಳು ಕಡಿದಾಗಿರುವುದಿಲ್ಲ. ನದಿಗೆ ಅಡ್ಡಲಾಗಿ ಭೂಮಿಯೂ ಅಷ್ಟು ಇಳಿಜಾರಾಗಿರುವುದಿಲ್ಲ. ಅಣೆಕಟ್ಟಿನ ನೀರಾವರಿಯಿಂದ ಈ ಭಾಗದಲ್ಲಿ ವಿಶಾಲವಾದ ಫಲವತ್ತಾದ ಬಯಲುಗಳಲ್ಲಿ ಬತ್ತವನ್ನು ಬೆಳೆಯುತ್ತಾರೆ. ನದಿಯ ನಾಲ್ಕನೆಯ ಮಜಲೇ ಡೆಲ್ಟ ಪ್ರದೇಶ. ಇಲ್ಲಿ ನೆಲ ಮಟ್ಟವಾಗಿರುತ್ತದೆಯಲ್ಲದೆ ನದಿ ನಿಧಾನವಾಗಿ ಹರಿದು ಕವಲು ಕವಲಾಗಿ ಒಡೆಯುತ್ತದೆ. ಸಮುದ್ರದ ಹತ್ತಿರವಿರುವ ಈ ಪ್ರದೇಶದಲ್ಲಿ ಎಲ್ಲೆಲ್ಲೂ ಮರಳು ತುಂಬಿರುತ್ತದೆ. 
	
ಮೇಲೆ ಭಾರ ಬಿದ್ದಾಗ ಮರಳು ಕುಗ್ಗುವುದಿಲ್ಲ. ಅದು ಇತ್ತ ಕಡೆ ಅತ್ತ ಕಡೆ ಚಲಿಸದಂಥ ಆವರಣವನ್ನು ಒದಗಿಸಿದರೆ ಎಷ್ಟು ಭಾರವನ್ನಾದರೂ ಹೊರಬಲ್ಲದು. ಆದರೆ ಅದು ಜಾರಿ ಹೋಗುವುದಕ್ಕೆ ಮಾತ್ರ ಅವಕಾಶವನ್ನು ಕೊಡಬಾರದು. ಅದಕ್ಕಾಗಿ ಇಟ್ಟಿಗೆಯ ಬಾವಿಗಳು, ದಸಿಗಳು (ಪೈಲ್ಸ್) ಮೊದಲಾದ ಉಪಾಯಗಳಿಂದ ಮರಳು ಕದಲದ ಹಾಗೆ ಮಾಡಿ ಮೇಲೆ ಕಲ್ಲುಗಾರೆಯ ಅಣೆಕಟ್ಟುಗಳನ್ನು ಕಟ್ಟುತ್ತಾರೆ. 
	
ಮರಳಿನ ಅಡಿಪಾಯದ ಮೇಲೆ ನಿಂತಿರುವ ಅಣೆಕಟ್ಟುಗಳು ಮೂರು ಬಗೆಯಾಗಿವೆ. 1. ಅಣೆಕಟ್ಟಿನ ಮೇಲಿನಿಂದ ನೀರು ನೇರವಾಗಿ ಮಟ್ಟವಾದ ಕಲ್ಲುಗಾರೆಯ ನೆಲಹಾಸಿನ ಮೇಲೆ ದುಮುಕುವುದು. 2. ಕೆಳಗಿನ ಕಲ್ಲುಹಾಸು ಇಳಿಜಾರಾಗಿರುವುದು. 3. ನೆಲಹಾಸು (ಏಪ್ರಾನ್) ಇಳಿಜಾರಾಗಿ ಕಲ್ಲುಗುಂಡುಗಳಿಂದ ತುಂಬಿರುವುದು. 
	
ಮೊದಲ ನಮೂನೆಯ ಅಣೆಕಟ್ಟಿನಲ್ಲಿ ನೆಲಹಾಸಿನ ಮಟ್ಟ ಕೆಳನೀರಿನ ಮಟ್ಟದಲ್ಲಿ ಅಥವಾ ಅದಕ್ಕಿಂತ ತಗ್ಗಾಗಿ ಇರುವುದು ಒಂದು ಬಗೆಯಾದರೆ ಕೆಳನೀರಿನ ಮಟ್ಟಕ್ಕಿಂತ ಎತ್ತವಾಗಿರುವುದು ಇನ್ನೊಂದು ಬಗೆ. 
	
ನೀರಿನ ಕೊಳ (ವಾಟರ್ ಕುಷನ್). ಇದು ಮೊದಲ ನಮೂನೆಯ ನೆಲಹಾಸಿನ ರೂಪಾಂತರ. ಇಲ್ಲಿ ದೊಡ್ಡ ನೆಲಹಾಸಿಗೆ ಬದಲಾಗಿ ನೀರಿನ ಕೊಳದ ಮೇಲೆ ಅಣೆಕಟ್ಟಿನ ಮೇಲಿನಿಂದ ದುಮುಕುವ ನೀರು ಬೀಳುತ್ತದೆ. ನಿಂತ ನೀರೇ ಬೀಳುವ ನೀರಿನ ರಭಸವನ್ನು ತಡೆಯುವುದರಿಂದ ನದಿಯ ತಳದ ಮೇಲಿನ ತ್ರಾಸ ಬಹಳ ಕಡಿಮೆಯಾಗುತ್ತದೆ. 
	
ಅಧಿಕ ನಿಯತಾಂಕದ ಅಣೆಕಟ್ಟು (ಹೈಕೋಯಿಫಿಷೆಂಟ್ ವಿಯರ್) : ಮೇಲುಗಡೆ ಕಡಿಮೆ ಅಗಲವುಳ್ಳ ಅಣೆಕಟ್ಟಿನ ಮೇಲಿನಿಂದ ದುಮುಕುವ ನೀರು ಅಣೆಕಟ್ಟಿನ ಕಡೆಗೆ ಸರಿದಾಗ ನೀರಿನ ಪ್ರವಾಹದ ಹಿಂದುಗಡೆ ಗಾಳಿಯ ಒತ್ತಡ ಕಡಿಮೆಯಾಗಿ ಸ್ವಲ್ಪ ಮಟ್ಟಿಗೆ ನಿರ್ವಾಯುತ್ವ ಒದಗುವ ಅಪಾಯವಿದೆ. ಇದಕ್ಕೆ ಪ್ರತಿಯಾಗಿ ಅಣೆಕಟ್ಟಿನ ಮುಂಭಾಗ ಲಂಬವಾಗಿಯೇ ಇದ್ದು ಹಿಂಭಾಗವನ್ನು ಬೀಳುವ ನೀರಿನ ಆಕೃತಿಗೆ ಸರಿಯಾಗಿ ಕಟ್ಟಿದಾಗ ಮೇಲೆ ಹರಿಯುವ ನೀರಿನ ಆಳ ಸಂವಿಧಾನದ ಆಳಕ್ಕಿಂತ ಹೆಚ್ಚಾದ ಹಾಗೂ ನಿಯತಾಂಕವೂ ಹೆಚ್ಚಾಗುತ್ತದೆ. ಅದಕ್ಕಾಗಿ ಈ ನಮೂನೆಯನ್ನು ಹೆಚ್ಚಿನ ನಿಯತಾಂಕದ ಅಣೆಕಟ್ಟು ಎನ್ನುತ್ತಾರೆ (ಶಿವಮೊಗ್ಗ ಜಿಲ್ಲೆಯ ತುಂಗಾ ಅಣೆಕಟ್ಟು). 
	
ಈಗ ಅಧಿಕ ನಿಯತಾಂಕದ ಅಣೆಕಟ್ಟುಗಳನ್ನು ಬಹಳ ಎತ್ತರವಾಗಿ ಕಟ್ಟುತ್ತಿದ್ದಾರೆ. ಪಂಜಾಬಿನ ಭಾಕ್ರಾ ಅಣೆಕಟ್ಟಿನ ಎತ್ತರ 224.47ಮೀ. ಇಷ್ಟು ಎತ್ತರದಿಂದ ನೀರು ಕೆಳಕ್ಕೆ ದುಮುಕುವಾಗ ಪ್ರಾಪ್ತವಾಗುವ ವೇಗವನ್ನು ಎಷ್ಟು ಗಟ್ಟಿಯಾದ ಕಲ್ಲೂ ತಡೆಯಲಾರದು. ಇವುಗಳಲ್ಲಿ ಲಂಬವಾಗಿ ಬೀಳುವ ನೀರಿನ ವೇಗವನ್ನು ಮಟ್ಟವಾಗಿ ಬದಲಾಯಿಸಲು ಬಕೇತ್ ಎಂಬ ಉಪಕರಣವನ್ನು ಬಳಸುತ್ತಾರೆ.
 
(ಎಚ್.ಸಿ.ಕೆ.)
 
(ಪರಿಷ್ಕರಣೆ: ಎಂ. ಜಿ. ಶ್ರೀನಿವಾಸನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ